ಬೆಂಗಳೂರು ಸಂಚಾರ ಪೊಲೀಸ್ ವಿಭಾಗದ ಸಾಧನೆಗಳು -2012

ಬೆಂಗಳೂರು ನಗರವು ಭಾರತದ ಅತಿ ಹೆಚ್ಚು ವೇಗವಾಗಿ ಬೆಳೆಯುತ್ತಿರುವ ಮಹಾ ನಗರಗಳಲ್ಲಿ ಒಂದಾಗಿದೆ.  ಬೆಂಗಳೂರು ನಗರದ ಜನಸಂಖ್ಯೆಯ ಸಮಾನುಪಾತದಲ್ಲಿ ನಗರದ ವಾಹನಗಳ ಸಂಖ್ಯೆಯೂ ಸಹ ಏರಿಕೆ ದಾಖಲಾಗುತ್ತಿದೆ.  1985 ರಲ್ಲಿ 1.75 ಲಕ್ಷ ಇದ್ದ ವಾಹನಗಳ ಸಂಖ್ಯೆಯು 2012ನೇ ಸಾಲಿಗೆ 42 ಲಕ್ಷಕ್ಕೇರಿದೆ.  ಪ್ರತಿದಿನ ಬೆಂಗಳೂರಿನ ರಸ್ತೆಗಳಿಗೆ ಸುಮಾರು 1000 ಹೊಸ ವಾಹನಗಳು ಇಳಿಯುತ್ತಿವೆ.  ಈ ಅಂಕಿ ಅಂಶಗಳಿಗೆ ತಾಳೆ ಮಾಡಿದಾಗ ಬೆಂಗಳೂರು ನಗರದಲ್ಲಿ ರಸ್ತೆ ಅಪಘಾತಗಳು ಇಳಿಮುಖ ಕಂಡುಬಂದಿರುತ್ತದೆ.  2012ನೇ ಸಾಲಿನ ಅಂತ್ಯಕ್ಕೆ ಬೆಂಗಳೂರಿನಲ್ಲಿ 5502 ಅಪಘಾತಗಳು ದಾಖಲಾಗಿದ್ದು ಈ ಸಂಖ್ಯೆಯು ಕಳೆದ 20 ವರ್ಷದಲ್ಲೇ ಅತಿ ಕಡಿಮೆಯಾಗಿದೆ.  ಅಲ್ಲದೇ 2012ನೇ ಸಾಲಿನ ಅಂತ್ಯಕ್ಕೆ ಅಪಘಾತದಲ್ಲಿ ಮೃತರಾದವರ ಸಂಖ್ಯೆಯು 755 ಗೆ ಇಳಿದಿದ್ದು ಈ ಸಂಖ್ಯೆಯು ಕಳೆದ 11 ವರ್ಷಗಳಲ್ಲೇ ಅತಿ ಕಡಿಮೆಯಾಗಿರುತ್ತದೆ.  ಬೆಂಗಳೂರು ನಗರ ಸಂಚಾರ ವಿಭಾಗದ ಹಲವು ಕ್ರಮಗಳು ಹಾಗೂ ಜನಸ್ನೇಹಿ ಕಾರ್ಯಕ್ರಮಗಳಿಂದ ಇದು ಸಾಧ್ಯವಾಗಿದೆ.  ಅವುಗಳಲ್ಲಿ ಕೆಲ ವಿನೂತನ ಯೋಜನೆ / ಉಪಕ್ರಮಗಳು ಕೆಳಗಿನಂತೆ ಇವೆ:

1) ನೂತನವಾಗಿ ಬೆಂಗಳೂರು ನಗರದಲ್ಲಿ ಮೂರು ಸಂಚಾರ ಪೊಲೀಸ್ ಠಾಣೆಗಳ ಸ್ಥಾಪನೆ:

ಬೆಂಗಳೂರು ನಗರದಲ್ಲಿ ಏರುತ್ತಿರುವ ವಾಹನಗಳ ಸಂಖ್ಯೆಯನ್ನು ಗಮನದಲ್ಲಿಟ್ಟು, ಅಪಘಾತಗಳ ಸಂಖ್ಯೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಹಾಗೂ ಪರಿಣಾಮಕಾರಿಯಾಗಿ ಸಂಚಾರ ನಿರ್ವಹಣೆಯ ಜಾರಿಗಾಗಿ ಕರ್ನಾಟಕ ರಾಜ್ಯ ಸರ್ಕಾರವು ಬೆಂಗಳೂರು ನಗರಕ್ಕೆ ಹೆಚ್ಚುವರಿಯಾಗಿ ಮೂರು ಸಂಚಾರ ಪೊಲೀಸ್ ಠಾಣೆಗಳನ್ನು ಸೃಜಿಸಿ ಆದೇಶ ಹೊರಡಿಸಿರುತ್ತದೆ.  ಅವುಗಳು: 1) ಕೆಂಗೇರಿ ಸಂಚಾರ ಪೊಲೀಸ್ ಠಾಣೆ, 2) ಜಾಲಹಳ್ಳಿ ಸಂಚಾರ ಪೊಲೀಸ್ ಠಾಣೆ ಮತ್ತು 3) 3) ಹುಳಿಮಾವು ಸಂಚಾರ ಪೊಲೀಸ್ ಠಾಣೆಗಳನ್ನು ಸೃಜಿಸಲಾಗಿದೆ.  

2) ಸಂಚಾರ ನಿಯಮಗಳ ಪರಿಣಾಮಕಾರಿ ಜಾರಿ:

ಬೆಂಗಳೂರು ನಗರದಲ್ಲಿ ಕಳೆದ ದಶಕದಲ್ಲೇ ಅತಿ ಹೆಚ್ಚಿನ ಸಂಚಾರಿ ನಿಯಮ ಉಲ್ಲಂಘನಾ ಪ್ರಕರಣಗಳನ್ನು 2012ನೇ ಸಾಲಿನಲ್ಲಿ ದಾಖಲಿಸಿದ್ದು ಅಂದರೆ 52 ಲಕ್ಷ ಪ್ರಕರಣಗಳನ್ನು ದಾಖಲಿಸಿ ಸುಮಾರು 53.85 ಕೋಟಿ ರೂಪಾಯಿಗಳ ದಂಡ ಮೊತ್ತವನ್ನು ಕಟ್ಟಿಸಿಕೊಳ್ಳಲಾಗಿದೆ.  ಪ್ರಪಂಚದ ಮತ್ತಾವುದೇ ನಗರದಲ್ಲಿ ಇಷ್ಟು ಹೆಚ್ಚಿನ ಪ್ರಕರಣಗಳನ್ನು ದಾಖಲಿಸಿರುವುದಿಲ್ಲ ಹಾಗೂ ಇಷ್ಟು ಹೆಚ್ಚಿನ ದಂಡವನ್ನು ಪಾವತಿಸಿಕೊಂಡಿರುವುದಿಲ್ಲ.

3) ಸಂಚಾರ ನಿಯಮಗಳನ್ನು ಪದೇ ಪದೇ ಉಲ್ಲಂಘಿಸುವವರ ಚಾಲನಾ ಪರವಾನಗಿ ಪತ್ರದ ಅಮಾನತ್ತು:

ಪದೇ ಪದೇ ಸಂಚಾರ ನಿಯಮ ಉಲ್ಲಂಘಿಸುವ ರಸ್ತೆ ಬಳಕೆದಾರರ ಮಾಹಿತಿಯನ್ನು ಡಾಟಾಬೇಸ್‌ನಲ್ಲಿ ಸೃಜಿಸಲಾಗಿದ್ದು ಇದರಿಂದ ಮೂರು ಬಾರಿ ಸಂಚಾರ ನಿಯಮ ಉಲ್ಲಂಘಿಸುವ ವಾಹನ ಸವಾರ / ಚಾಲಕರ ಚಾಲನಾ ಪರವಾನಗಿ ಪತ್ರವನ್ನು ವಶಕ್ಕೆ ತೆಗೆದುಕೊಂಡು ವಿವರಗಳ ಸಮೇತ ಸಂಬಂಧಪಟ್ಟ ಪ್ರಾದೇಶಿಕ ಸಾರಿಗೆ ಪ್ರಾಧಿಕಾರಕ್ಕೆ ಮುಂದಿನ ಕ್ರಮಕ್ಕಾಗಿ ಕಳುಹಿಸಿಕೊಡಲಾಗುತ್ತಿದ್ದು ಈಗಾಗಲೇ 4537 ಚಾಲನಾ ಪರವಾನಗಿ ಪತ್ರಗಳನ್ನು ತಾತ್ಕಾಲಿಕವಾಗಿ ಅಮಾನತ್ತಿನಲ್ಲಿಡುವಂತೆ ಕೋರಿ ಕಳುಹಿಸಿಕೊಡಲಾಗಿದೆ.  ಈ ಕ್ರಮದಿಂದ ಬೆಂಗಳೂರು ನಗರದ ರಸ್ತೆಗಳಲ್ಲಿ ಸಂಚಾರ ನಿಯಮಗಳ ಪಾಲನೆಯಲ್ಲಿ ಹೆಚ್ಚಿನ ಶಿಸ್ತನ್ನು ಜಾರಿಗೆ ತರುವಲ್ಲಿ ಯಶಸ್ಸನ್ನು ಕಂಡಿದ್ದು ಮುಂದಿನ ದಿನಗಳಲ್ಲಿ ಇದನ್ನು ಇನ್ನೂ ಹೆಚ್ಚು ಪರಿಣಾಮಕಾರಿಯಾಗಿ ಬಳಸಲಾಗುವುದು.

4) ಸ್ವಯಂಚಾಲಿತ ಸಂಚಾರ ವ್ಯವಸ್ಥೆ ಜಾರಿ (Automation Enforcement):

ಬೆಂಗಳೂರು ನಗರ ಸಂಚಾರ ನಿಯಮ ಉಲ್ಲಂಘನೆಯ ದಂಡ ಪಾವತಿಯಲ್ಲಿ ಹೆಚ್ಚಿನ ಪಾರದರ್ಶಕತೆಯನ್ನು ತರುವ ನಿಟ್ಟಿನಲ್ಲಿ ನಿಯಮ ಉಲ್ಲಂಘಿಸಿದವರ ಹಾಗೂ ಸಂಚಾರ ಪೊಲೀಸ್ ಅಧಿಕಾರಿಗಳ ನಡುವೆ ಯಾವುದೇ ಪರಸ್ಪರ ಸಂಬಂಧ ಇಲ್ಲದೇ ಸಂಚಾರ ಸರ್ವೇಲೆನ್ಸ್ ಕ್ಯಾಮರಾಗಳನ್ನು ಹಾಗೂ ಜಂಕ್ಷನ್ ಪೊಲೀಸರಿಗೆ ಒದಗಿಸಿರುವ 500 ಡಿಜಿಟಲ್ ಕ್ಯಾಮರಾಗಳ ಮೂಲಕ ನಿಯಮ ಉಲ್ಲಂಘಿಸಿದವರ ವಾಹನಗಳ ಛಾಯಾಚಿತ್ರಗಳನ್ನು ಸೆರೆಹಿಡಿದು ಪ್ರಕರಣಗಳನ್ನು ದಾಖಲಿಸಲಾಗಿದೆ.  2012ನೇ ಸಾಲಿನಲ್ಲಿ ಸುಮಾರು 16,91,863 ಪ್ರಕರಣಗಳನ್ನು ಕ್ಯಾಮರಾಗಳ ಮುಖಾಂತರ ದಾಖಲು ಮಾಡಲಾಗಿದೆ.

5) ಬೆಂಗಳೂರು ನಗರಾದ್ಯಂತ ವಿವಿಧ ರೀತಿಯ ವಾಹನಗಳಿಗೆ ಸಮಾನ ವೇಗಮಿತಿ ಅಳವಡಿಕೆ:

ಬೆಂಗಳೂರು ನಗರಾದ್ಯಂತ ವಿವಿಧ ರೀತಿಯ ವಾಹನಗಳಿಗೆ ಸಮಾನ ವೇಗಮಿತಿ ಅಳವಡಿಕೆ ಹಾಗೂ ಈ ಬಗ್ಗೆ ಸಾರ್ವಜನಿಕರಿಗೆ ತಿಳುವಳಿಕೆ ಮೂಡಿಸುವ ನಿಟ್ಟಿನಲ್ಲಿ ಪ್ರತಿ ಸಂಚಾರ ಪೊಲೀಸ್ ಠಾಣೆಯ ಮುಖ್ಯ ಸ್ಥಳಗಳಲ್ಲಿ ಮತ್ತು ವೃತ್ತಗಳಲ್ಲಿ ಜಾಹೀರಾತು ಫಲಕಗಳನ್ನು ಅಳವಡಿಸಿ ಹೆಚ್ಚಿನ ಪ್ರಚಾರವನ್ನು ನೀಡಲಾಗಿತ್ತು.  ಅಲ್ಲದೇ ಹೆಚ್ಚುವರಿಯಾಗಿ 4 ಇಂಟರ್‌ಸೆಪ್ಟರ್ ವಾಹನಗಳನ್ನು ಬಳಸಿ ಅತಿವೇಗವಾಗಿ ಚಲಿಸುವ ವಾಹನಗಳ ವಿರುದ್ಧ ಸುಮಾರು 1.19 ಲಕ್ಷ ಪ್ರಕರಣಗಳನ್ನು ದಾಖಲಿಸಲಾಗಿದೆ.

6) ಪರಿಣಾಮಕಾರಿ ಆಂದೋಲನಗಳು:

  • ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವವರ ವಿರುದ್ಧ ವಿಶೇಷ ಆಂದೋಲನ ಮತ್ತು 2012ನೇ ಸಾಲಿನಲ್ಲಿ ಸುಮಾರು 60,000 ಪ್ರಕರಣಗಳನ್ನು ನಗರಾದ್ಯಂತ ದಾಖಲಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
  • ಹೆಲ್ಮೆಟ್‌ರಹಿತ ದ್ವಿಚಕ್ರ ವಾಹನ ಸವಾರಿ ವಿರುದ್ಧ ಕಠಿಣ ನಿಯಮ ಜಾರಿ ಆಂದೋಲನಗಳನ್ನು ನಡೆಸಿದ್ದು 2012 ನೇ ಸಾಲಿನಲ್ಲಿ ಸುಮಾರು 7.52 ಲಕ್ಷ ಪ್ರಕರಣಗಳನ್ನು ದಾಖಲಿಸಲಾಗಿದೆ.
  • ವಾಹನ ಚಾಲನೆ ಮಾಡುವಾಗ ಮೊಬೈಲ್ ಫೋನ್ ಉಪಯೋಗಿಸುವವರ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಿ ಕಳೆದ ಸಾಲಿನಲ್ಲಿ 2.07 ಲಕ್ಷ ಪ್ರಕರಣಗಳನ್ನು ದಾಖಲಿಸಲಾಗಿದೆ.
  • ಅಪಘಾತಗಳಿಗೆ ಅತಿ ಹೆಚ್ಚಾಗಿ ಕಾರಣವಾಗಿರುವ ಹೆಚ್ಚಿನ ವೇಗವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ನಗರಾದ್ಯಂತ ನಿಖರವಾದ ಸ್ಥಳಗಳನ್ನು ಗುರುತಿಸಿ ವೈಜ್ಞಾನಿಕವಾಗಿ ರಸ್ತೆ ಉಬ್ಬರಗಳನ್ನು ನಿರ್ಮಿಸಿದ್ದು ಜೊತೆಗೆ ಅತಿ ಹೆಚ್ಚು ವೇಗವಾಗಿ ಚಲಿಸುವ ವಾಹನ ಸವಾರರುಗಳ ವಿರುದ್ಧ ಇಂಟರ್‌ಸೆಪ್ಟರ್ ವಾಹನಗಳನ್ನು ಬಳಸಿ ಹೆಚ್ಚಿನ ಪ್ರಕರಣಗಳನ್ನು ದಾಖಲಿಸಲಾಗಿದೆ.

7) ಪಥಶಿಸ್ತು ಜಾರಿ ಆಂದೋಲನ:

ಬೆಂಗಳೂರು ನಗರದ ಕೇಂದ್ರ ಭಾಗದಲ್ಲಿನ ಹೆಚ್ಚು ಸಂಚಾರ ದಟ್ಟಣೆ ಇರುವ ಪ್ರದೇಶಗಳನ್ನು ಗುರುತಿಸಿ ರಸ್ತೆ ಅಗಲವಿದ್ದು ಮುಕ್ತ ಎಡ ತಿರುವು ಅಥವಾ ಬಲ ತಿರುವು ಇರುವ ಕಡೆಗಳಲ್ಲಿ ಸಂಚಾರ ಪರಿಕರಗಳನ್ನು (Reflective Tubular cones) ಅಳವಡಿಸಿ ಪಥಶಿಸ್ತನ್ನು ಜಾರಿ ಮಾಡುವ ಉದ್ದೇಶದಿಂದ ವಿಶೇಷವಾಗಿ ಯುವಜನರ ಪ್ರಶ್ನಾತೀತ ನಾಯಕನಾದ ಶ್ರೀ. ರಾಹುಲ್ ದ್ರಾವಿಡ್ ರವರನ್ನು ಈ ಆಂದೋಲನದ ರಾಯಭಾರಿಯಾಗಿ ತೊಡಗಿಸಿಕೊಂಡಿರುವ ಕಾರಣ ನಿರೀಕ್ಷೆಗೂ ಮೀರಿ ಅಪಘಾತಗಳ ಸಂಖ್ಯೆಯು ಇಳಿಮುಖವಾಗುವುದಕ್ಕೆ ಕಾರಣವಾಗಿರುತ್ತದೆ.

8) ಅಂಬುಲೆನ್ಸ್ ಗಳಿಗೆ ಮೊದಲ ಆದ್ಯತೆ ಆಂದೋಲನ:

ಅಂಬುಲೆನ್ಸ್ ಗಳಿಗೆ ಮೊದಲ ಆದ್ಯತೆ ನೀಡಿ ರೋಗಿ ಮತ್ತು ಗಾಯಾಳುಗಳ ಅಮೂಲ್ಯವಾದ ಪ್ರಾಣರಕ್ಷಣೆಗಾಗಿ ರಸ್ತೆಗಳಲ್ಲಿ ನಾವು ವಾಹನ ಚಾಲನೆ ಮಾಡುವಾಗಿ ಯಾವ ಕ್ರಮ ಅನುಸರಿಸಬೇಕು ಎಂಬುದರ ಬಗ್ಗೆ ಪ್ರಾತ್ಯಕ್ಷಿಕೆಯನ್ನು ನೀಡಿದ್ದು ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ|| ವೀರೇಂದ್ರ ಹೆಗ್ಗಡೆಯವರನ್ನು ಈ ಆಂದೋಲನದಲ್ಲಿ ರಾಯಭಾರಿಯನ್ನಾಗಿ ತೊಡಗಿಸಿಕೊಂಡಿದ್ದು ಸಾರ್ವಜನಿಕರಿಂದ ಅಪಾರವಾದ ಧನಾತ್ಮಕ ಪ್ರತಿಕ್ರಿಯೆ ಲಭ್ಯವಾಗಿರುತ್ತದೆ.  ಮತ್ತು ಅಪಘಾತಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಹಕಾರಿಯಾಗಿರುತ್ತದೆ.

9) ವಿನೂತನ ಪಬ್ಲಿಕ್ ಐ ಆಂದೋಲನ:

ಬೆಂಗಳೂರು ನಗರದಲ್ಲಿ ದಿನೇ-ದಿನೇ ಹೆಚ್ಚುತ್ತಿರುವ ವಾಹನಗಳ ಸಂಖ್ಯೆಗಳಿಗನುಗುಣವಾಗಿ ಸಾರ್ವಜನಿಕರು ರಸ್ತೆಯ ಮೇಲೆ ಶಿಸ್ತನ್ನು ಅನುಸರಿಸುವುದು ಹಾಗೂ ರಸ್ತೆಯ ನಿಯಮಗಳನ್ನು ಪಾಲಿಸುವುದನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವ ನಿಟ್ಟಿನಲ್ಲಿ ಸಾರ್ವಜನಿಕರೂ ಸಹ ಸಂಚಾರ ಪೊಲೀಸರಿಗೆ ನೆರವಾಗುವಂತೆ ವಿನೂತನ ಪಬ್ಲಿಕ್ ಐ ಎಂಬ ಯೋಜನೆಯನ್ನು ಜಾರಿಗೊಳಿಸಿದ್ದು, ಸಾರ್ವಜನಿಕರು ರಸ್ತೆಯ ಮೇಲೆ ತಾವು ಗಮನಿಸುವ ಸಂಚಾರ ನಿಯಮ ಉಲ್ಲಂಘನೆ ಮಾಡುವ ವಾಹನಗಳ ವಿವರಗಳನ್ನು ಛಾಯಾಚಿತ್ರ ತೆಗೆದು ಬೆಂಗಳೂರು ನಗರ ಸಂಚಾರ ಪೊಲೀಸ್ ವೆಬ್ ಸೈಟ್‌ಗೆ ಅಪ್ ಲೋಡ್ ಮಾಡಬಹುದಾಗಿದೆ.  ಈ ನಿಟ್ಟಿನಲ್ಲಿ ಈಗಾಗಲೇ ಸುಮಾರು 600 ಕ್ಕೂ ಹೆಚ್ಚು ಛಾಯಾಚಿತ್ರಗಳು ಲಭ್ಯವಾಗಿದ್ದು ಜನರಲ್ಲಿ ಸಂಚಾರ ನಿಯಮ ಪಾಲನೆಯ ಬಗ್ಗೆ ಹೆಚ್ಚಿನ ನಿಗಾ ವಹಿಸುವಂತೆ ಪ್ರೇರೇಪಿಸುವಲ್ಲಿ ಹಾಗೂ ಈ ಮೂಲಕ ಅಪಘಾತಗಳನ್ನು ಕಡಿಮೆಗೊಳಿಸುವಲ್ಲಿ ಪ್ರಾರಂಭದಲ್ಲೇ ನಿರೀಕ್ಷೆಗೂ ಮೀರಿ ಸಾಕಷ್ಟು ಯಶಸ್ಸು ದೊರೆತಿದೆ. 

10) ಕಡ್ಡಾಯ ಆಸನ ಪಟ್ಟಿಗಳನ್ನು ಧರಿಸುವ ಆಂದೋಲನ:

ನಗರದ ಹೊರವಲಯಗಳಲ್ಲಿ, ಸಂಚಾರ ದಟ್ಟಣೆ ಕಡಿಮೆ ಇರುವ ಪ್ರದೇಶಗಳಲ್ಲಿ ಕಾರ್ ಚಾಲಕರು ಅತಿವೇಗವಾಗಿ ವಾಹನ ಓಡಿಸುವುದನ್ನು ರೂಡಿಸಿಕೊಂಡಿದ್ದು ಅಪಘಾತಗಳು ಸಂಭವಿಸಿದಾಗ ಆಸನ ಪಟ್ಟಿ ಧರಿಸದೇ ಇರುವ ಸಂದರ್ಭದಲ್ಲಿ ಸಾಮಾನ್ಯ ಅಪಘಾತವೂ ಸಹ ಮಾರಣಾಂತಿಕವಾಗಿ ಮಾರ್ಪಡುವ ಸಾಧ್ಯತೆ ಇದ್ದು ಬೆಂಗಳೂರು ನಗರದ ಎಲ್ಲಾ ರಸ್ತೆಗಳಲ್ಲಿ ವಿಶೇಷ ಕಾರ್ಯಾಚರಣೆ ಮೂಲಕ ಆಸನ ಪಟ್ಟಿಗಳನ್ನು ಧರಿಸುವುದನ್ನು ಪರಿಣಾಮಕಾರಿಯಾಗಿ ಜಾರಿಗೆ ತಂದಿದ್ದು ಅಪಘಾತಗಳ ಸಂಖ್ಯೆ ತಗ್ಗಿಸುವಲ್ಲಿ ಇದು ಯಶಸ್ವಿಯಾಗಿದೆ.  2012ನೇ ಸಾಲಿನ ಅಂತ್ಯಕ್ಕೆ ಆಸನ ಪಟ್ಟಿಗಳನ್ನು ಧರಿಸದೇ ಇರುವವರ ವಿರುದ್ಧ ಸುಮಾರು 1.95 ಲಕ್ಷ ಪ್ರಕರಣಗಳನ್ನು ದಾಖಲಿಸಲಾಗಿದೆ.

11) ವಾಹನಗಳ ಗಾಜುಗಳಿಂದ ಅಪಾರದರ್ಶಕ ವಸ್ತುಗಳನ್ನು ತೆಗೆಸುವ ಆಂದೋಲನ:

ಮಾನ್ಯ ಘನ ಸವೋಚ್ಛ ನ್ಯಾಯಾಲಯವು ರಿಟ್ ಅರ್ಜಿ 265/2011 ರಲ್ಲಿ ಭಾರತದಾದ್ಯಂತ ಯಾವುದೇ ವಾಹನದ ಗಾಜುಗಳಿಗೆ ನಿಗಧಿಪಡಿಸಿದ್ದಕ್ಕಿಂತ ಹೆಚ್ಚಿನ ಅಪಾರದರ್ಶಕ ವಸ್ತುಗಳನ್ನು ಹಾಕಬಾರದೆಂದು ನೀಡಿರುವ ತೀರ್ಪನ್ನು ಬೆಂಗಳೂರು ನಗರ ಸಂಚಾರ ಪೊಲೀಸ್ ವಿಭಾಗವು ಅತ್ಯಂತ ಪರಿಣಾಮಕಾರಿಯಾಗಿ ಜಾರಿ ಮಾಡಿರುತ್ತದೆ.  ಬೆಂಗಳೂರು ನಗರದಲ್ಲಿ ಸಂಚರಿಸುವ ಎಲ್ಲಾ ವಾಹನಗಳಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಅಪಾರದರ್ಶಕ ಗಾಜುಗಳನ್ನು ಹೊಂದಿರುವ ವಾಹನಗಳ ಅಪಾರದರ್ಶಕ ವಸ್ತುಗಳನ್ನು ತೆಗೆಸಲು ಸಾಕಾಗುವಷ್ಟು ಸಮಯಾವಕಾಶವನ್ನು ಸಾರ್ವಜನಿಕರಿಗೆ ನೀಡಿತ್ತು ನಂತರ ಒಂದು ಆಂದೋಲನವನ್ನು ನಡೆಸಲಾಗಿದ್ದು ಅದರಲ್ಲಿ ಎಲ್ಲಾ ವಾಹನಗಳಲ್ಲಿ ಅಪಾರದರ್ಶಕ ವಸ್ತುಗಳನ್ನು ಉಚಿತವಾಗಿ ತೆಗೆಯುವ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿತ್ತು.  ಈ ಆಂದೋಲನವು ಸಾರ್ವಜನಿಕರ ಪ್ರಶಂಸೆಯನ್ನು ಗಳಿಸಿರುತ್ತದೆ.

12) ಆಟೋ ರಿಕ್ಷಾ ವ್ಯವಸ್ಥೆಯ ಸುಧಾರಣೆಗಳು:

ಬೆಂಗಳೂರು ನಗರವು ಸಿಲಿಕಾನ್ ಸಿಟಿ ಎಂಬ ಬಿರುದು ಪಡೆದಿದ್ದು ಬೆಂಗಳೂರಿನಲ್ಲಿ ಪ್ರಪಂಚದ ಅತಿ ಹೆಚ್ಚು ಸಾಫ್ಟ್‌ವೇರ್ ಕಂಪನಿಗಳು ನೆಲೆಸಿರುತ್ತವೆ.  ಅದೇ ರೀತಿ ನಗರದಲ್ಲಿ ಅನೇಕ ಮಾಲ್‌ಗಳು, ಬಹುಮಹಡಿಗಳ ಕಟ್ಟಡಗಳು ತಲೆ ಎತ್ತಿರುತ್ತವೆ.  ಇಂತಹ ನಗರದಲ್ಲಿ ಆಟೋ ಚಾಲಕರುಗಳು ಕರೆದಲ್ಲಿಗೆ ಬಾಡಿಗೆಗೆ ಬಾರದೇ, ಹೆಚ್ಚು ಬಾಡಿಗೆಯನ್ನು ಪಡೆಯುವ ಪ್ರವೃತ್ತಿಗಳನ್ನು ಬೆಳೆಸಿಕೊಂಡಿರುವ ಬಗ್ಗೆ ಇತ್ತೀಚೆಗೆ ಸಾರ್ವಜನಿಕರಿಂದ ಅತಿ ಹೆಚ್ಚು ದೂರುಗಳು ಕೇಳಿಬರುತ್ತಿದ್ದ ಕಾರಣ ಈ ಕೆಳಕಂಡ ಕ್ರಮಗಳನ್ನು ಬೆಂಗಳೂರು ನಗರ ಸಂಚಾರ ಪೊಲೀಸ್ ವಿಭಾಗದಿಂದ ಕೈಗೊಳ್ಳಲಾಗಿದೆ.

ಅ) ನಗರದ ಪ್ರಮುಖ ಸ್ಥಳಗಳನ್ನು ಗುರುತಿಸಿ ಒಟ್ಟು 16 ಪ್ರಮುಖ ಸ್ಥಳಗಳಲ್ಲಿ (ಪೂರ್ವ ಪಾವತಿಸಿದ) ಪ್ರೀ-ಫಿಕ್ಸ್ಡ್ ಆಟೋ ನಿಲ್ದಾಣಗಳನ್ನು ಸ್ಥಾಪಿಸಲಾಗಿದೆ.

ಆ) ಆಟೋ ಚಾಲಕರ ಗುರುತಿನ ಚೀಟಿ ಪ್ರದರ್ಶಕವನ್ನು ಪುನಃಶ್ಚೇತನಗೊಳಿಸಲಾಗಿದ್ದು ಎಲ್ಲಾ ಆಟೋ ಚಾಲಕರು ತಮಗೆ ನೀಡಿರುವ ಗುರುತಿನ ಚೀಟಿಯನ್ನು ಪ್ರಯಾಣಿಕರಿಗೆ ಕಾಣುವಂತೆ ಹಾಕಿಸಲಾಗಿದೆ.  ಇದರಿಂದ ಸಾವಿರಾರು ಸಾರ್ವಜನಿಕರು ಅವರ ವಸ್ತುಗಳನ್ನು ಆಟೋ ರಿಕ್ಷಾಗಳಲ್ಲಿ ಕಳೆದುಕೊಂಡ ಸಂದರ್ಭದಲ್ಲಿ ಪತ್ತೆ ಮಾಡಲು ಸಹಕಾರಿಯಾಗಿವೆ.  

ಇ) ಕರೆದಲ್ಲಿಗೆ ಬಾಡಿಗೆಗೆ ಬಾರದೇ ಇರುವ ಹಾಗೂ ಹೆಚ್ಚು ಬಾಡಿಗೆ ಕೇಳುವ ಆಟೋ ಚಾಲಕರ ವಿರುದ್ಧ ಕ್ರಮಗಳನ್ನು ಜರುಗಿಸುವ ಸಲುವಾಗಿ ಐ.ವಿ.ಆರ್.ಎಸ್ ದೂರು ವ್ಯವಸ್ಥೆ (IVRS) ಯನ್ನು  ಸ್ಥಾಪಿಸಲಾಗಿದೆ.

ಈ) ಇಂತಹ ಪ್ರವೃತ್ತಿ ಬೆಳೆಸಿಕೊಂಡಿರುವ ಆಟೋ ಚಾಲಕರ ವಿರುದ್ಧ ಎಸ್.ಎಂ.ಎಸ್ ನಲ್ಲೂ ಸಹ ದೂರುಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

ಉ) ಇಂತಹ ಆಟೋ ಚಾಲಕರ ವಿರುದ್ಧ ಈ-ಮೇಲ್ ಮೂಲಕವೂ ಸಹ ದೂರುಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

ಊ) ಇಂತಹ ನಿಯಮ ಉಲ್ಲಂಘನೆಗಳ ವಿರುದ್ಧ ಬೆಂಗಳೂರು ನಗರ ಸಂಚಾರ ಫೇಸ್‌ಬುಕ್ ನಲ್ಲೂ ದೂರು ಸಲ್ಲಿಸಲು ಅವಕಾಶ ನೀಡಲಾಗಿದೆ.     

13) ವೃತ್ತಿಪರ ವಾಹನ ಚಾಲಕರುಗಳಿಗೆ ರಸ್ತೆ ಸುರಕ್ಷತೆ ಬಗ್ಗೆ ತರಬೇತಿ ಕಾರ್ಯಕ್ರಮಗಳು:

ಬೆಂಗಳೂರು ನಗರದಲ್ಲಿ ಸಹಸ್ರಾರು ಸಾಫ್ಟ್‌ವೇರ್ ಕಂಪನಿಗಳೂ ಸೇರಿದಂತೆ ಬಹುದೇಶೀಯ ಕಂಪನಿಗಳು, ಕಾರ್ಯನಿರ್ವಹಿಸುತ್ತಿದ್ದು ಇಂತಹ ಕಂಪನಿಗಳಲ್ಲಿ ಸಹಸ್ರಾರು ಕೆಲಸಗಾರರನ್ನು ಸೂಕ್ತ ಸಮಯದಲ್ಲಿ ಅವರ ವಾಸಸ್ಥಳದಿಂದ ಕೆಲಸ ನಿರ್ವಹಿಸುವ ಸ್ಥಳಕ್ಕೆ ಕೊಂಡೊಯ್ಯಲು ಖಾಸಗಿ ವಾಹನಗಳ ಮೇಲೆ ಅವಲಂಬಿಸಿದ್ದು ಇಂತಹ ಖಾಸಗಿ ವಾಹನ ಚಾಲಕರ ಸಮೂಹಕ್ಕೆ ರಸ್ತೆ ಸುರಕ್ಷತೆ ಬಗ್ಗೆ ಹಾಗೂ ರಕ್ಷಣಾತ್ಮಕ ಚಾಲನೆಯ ಬಗ್ಗೆ ಅರಿವು ಮೂಡಿಸುವ ಹಲವಾರು ತರಬೇತಿ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಏರ್ಪಡಿಸುವುದರ ಮೂಲಕ ಅಪಘಾತಗಳ ಸಂಖ್ಯೆ ತಗ್ಗಿಸುವಲ್ಲಿ ಪರಿಶ್ರಮ ವಹಿಸಲಾಗಿದೆ. 

14) ಶಾಲಾ ವಾಹನ ಚಾಲಕರ ತರಬೇತಿ ಕಾರ್ಯಕ್ರಮಗಳು:

ಬೆಂಗಳೂರು ನಗರದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ವಿದ್ಯಾ ಸಂಸ್ಥೆಗಳಿದ್ದು ಈ ವಿದ್ಯಾ ಸಂಸ್ಥೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಶಾಲಾ ವಾಹನ ಚಾಲನೆ ಮಾಡುವ ಚಾಲಕರಿಗೆ ವಿಶೇಷವಾಗಿ ತರಬೇತಿಯನ್ನು ನೀಡಲಾಗಿದ್ದು ಶಾಲಾ ಮಕ್ಕಳನ್ನು ಶಾಲೆಗೆ ಕರೆದೊಯ್ಯುವಾಗಿ ಅನುಸರಿಸಬೇಕಾದ ಎಲ್ಲಾ ಸೂಕ್ಷ್ಮ ವಿಷಯಗಳ ಬಗ್ಗೆ ಅರಿವು ಮೂಡಿಸುವಲ್ಲಿ ಯಶಸ್ವಿಯಾಗಿದ್ದು ಈ ಕ್ರಮವೂ ಸಹ ಅಪಘಾತಗಳನ್ನು ತಗ್ಗಿಸುವ ನಿಟ್ಟಿನಲ್ಲಿ ಯಶಸ್ಸನ್ನು ಕಂಡಿದೆಯೆಂದರೆ ಉತ್ಪ್ರೇಕ್ಷೆಯಾಗಲಾರದು.

15) ಆಟೋ ರಿಕ್ಷಾಗಳಲ್ಲಿ ಅಗತ್ಯಪಡಿಸಿದ್ದಕಿಂತ (6 ಶಾಲಾ ಮಕ್ಕಳು) ಹೆಚ್ಚಿನ ಮಕ್ಕಳನ್ನು ಕರೆದೊಯ್ಯುವುದು:

ಆಟೋ ರಿಕ್ಷಾಗಳಲ್ಲಿ ಅಗತ್ಯಪಡಿಸಿದ್ದಕಿಂತ (6 ಶಾಲಾ ಮಕ್ಕಳು) ಹೆಚ್ಚಿನ ಮಕ್ಕಳನ್ನು ಕರೆದೊಯ್ಯುವ ಚಾಲಕರ ಮೇಲೆ ಉಗ್ರ ಕ್ರಮಗಳನ್ನು ಕೈಗೊಂಡಿದ್ದು ಪರ್ಮಿಟ್ ನಿಬಂಧನೆಗಳ ಉಲ್ಲಂಘನೆಗೆ ಕೇಸು ದಾಖಲಿಸಿ ನ್ಯಾಯಾಲಯದಲ್ಲಿ ದಂಡ ಕಟ್ಟುವಂತೆ ಮಾಡಿದ್ದು ಇದರಿಂದ ಸಾಕಷ್ಟು ಸುಧಾರಣೆಯಾಗಿದೆ.  ಕಳೆದ ಸಾಲಿನಲ್ಲಿ ಸರಿಸುಮಾರು 2159 ಪ್ರಕರಣಗಳನ್ನು ದಾಖಲಿಸಲಾಗಿದೆ.

16) ಜೀರೋ ಟಾಲರೆನ್ಸ್ ರಸ್ತೆಗಳು:

ನಗರದಲ್ಲಿ ದಿನೇದಿನೇ ಹೆಚ್ಚುತ್ತಿರುವ ವಾಹನಗಳ ಸಂಖ್ಯೆಯಿಂದ ತಪ್ಪು ನಿಲುಗಡೆ ಮಾಡುವ ವಾಹನಗಳ ಸಂಖ್ಯೆಯೂ ಸಹ ಏರುತ್ತಿರುವುದು ಸಾರಿಗೆ ವ್ಯವಸ್ಥೆಗೆ ತೀವ್ರ ಅಡಚಣೆಯಾಗಿದೆ.  ಇದನ್ನು ನಿವಾರಿಸುವ ನಿಟ್ಟಿನಲ್ಲಿ ಬೆಂಗಳೂರು ನಗರದ ಅತಿ ಮುಖ್ಯ 107 ರಸ್ತೆಗಳನ್ನು ಗುರುತಿಸಿ ಅವುಗಳನ್ನು ಜೀರೋ ಟಾಲರೆನ್ಸ್ ರಸ್ತೆಗಳು ಎಂದು ಘೋಷಿಸಿದ್ದು ಸದರಿ ರಸ್ತೆಗಳಲ್ಲಿ ಯಾವುದೇ ರೀತಿಯ ಪಾರ್ಕಿಂಗ್ ನಿಯಮಗಳ ಉಲ್ಲಂಘನೆಯಾಗದಂತೆ ಪರಿಣಾಮಕಾರಿಯಾಗಿ ಜಾರಿ ಮಾಡಲಾಗುತ್ತಿದೆ.  ಇದರಿಂದ ಸಂಚಾರವು ಸುಗಮಗೊಂಡಿದ್ದು ತಪ್ಪು ನಿಲುಗಡೆಯಿಂದ ಉಂಟಾಗುತ್ತಿದ್ದ ಅಪಘಾತಗಳ ಸಂಖ್ಯೆ ಇಳಿಮುಖವಾಗಿದೆ.

17) ನಗರದ ವಿವಿಧ ರಸ್ತೆಗಳಲ್ಲಿ ಅವೈಜ್ಞಾನಿಕವಾಗಿ ನಿರ್ಮಿಸಿದ್ದ ರಸ್ತೆ ಉಬ್ಬರಗಳನ್ನು ತೆರವುಗೊಳಿಸಲಾಗಿದೆ:

ಬೆಂಗಳೂರು ನಗರದಲ್ಲಿ ಅನಧಿಕೃತವಾಗಿ ನಿರ್ಮಿಸಲಾಗಿದ್ದ ರಸ್ತೆ ಉಬ್ಬರಗಳಿಂದ ಕಳೆದ ಹಲವು ವರ್ಷಗಳಲ್ಲಿ ಹಲವಾರು ದ್ವಿಚಕ್ರ ವಾಹನ ಸವಾರರು ಅದರಲ್ಲೂ ಪ್ರಮುಖವಾಗಿ ಇರುಳಿನ ಸಮಯದಲ್ಲಿ ಸ್ವಯಂ ಅಪಘಾತಕ್ಕೀಡಾಗಿ ಪ್ರಾಣ ಕಳೆದುಕೊಂಡಿರುತ್ತಾರೆ.  ಇಂತಹ ಅಪಘಾತಗಳನ್ನು ತಡೆಯುವ ನಿಟ್ಟಿನಲ್ಲಿ ಬೆಂಗಳೂರು ನಗರ ಸಂಚಾರ ಪೊಲೀಸ್ ವಿಭಾಗವು ಬೆಂಗಳೂರು ನಗರದಾದ್ಯಂತ ಅವೈಜ್ಞಾನಿಕ ಹಾಗೂ ಅನಧಿಕೃತವಾಗಿ ನಿರ್ಮಿಸಲಾಗಿದ್ದ ರಸ್ತೆ ಉಬ್ಬರಗಳನ್ನು ತೆರವುಗೊಳಿಸಲಾಗಿದೆ.  ಪ್ರಮುಖ ರಸ್ತೆಗಳಲ್ಲಿ ವಾಹನದ ವೇಗವನ್ನು ನಿಯಂತ್ರಿಸಿ ಅಪಘಾತಗಳನ್ನು ತಡೆಯುವ ಸಲುವಾಗಿ ಹಾಗೂ ಅವಶ್ಯಕವಿರುವ ಸ್ಥಳಗಳಲ್ಲಿ ಮಾತ್ರವೇ ಐ.ಅರ್.ಸಿ ಮಾದರಿಯಲ್ಲಿ ವೈಜ್ಞಾನಿಕವಾಗಿ ರಸ್ತೆ ಉಬ್ಬರಗಳನ್ನು ನಿರ್ಮಿಸಲಾಗಿದೆ. 

18) ನಾಗರೀಕರ ಪರಿಣಾಮಕಾರಿ ಸಹಭಾಗಿತ್ವ:

ಸುಗಮ ಸಂಚಾರವನ್ನು ಏರ್ಪಡಿಸುವ ನಿಟ್ಟಿನಲ್ಲಿ ಹಾಗೂ ಅಪಘಾತಗಳನ್ನು ತಗ್ಗಿಸುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಬೆಂಗಳೂರು ನಗರ ಮಟ್ಟದಲ್ಲಿ ಮಾನ್ಯ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ನಾಗರೀಕ ಸಂಚಾರ ವೇದಿಕೆ ಯನ್ನು ಪ್ರಾರಂಭಿಸಿದ್ದು ಇದರಲ್ಲಿ ಸಂಚಾರ ತಜ್ಞರು, ಸಮಾಜಿಕ ಕಾರ್ಯಕರ್ತರು ಹಾಗೂ ಆಯ್ದ ಸಾರ್ವಜನಿಕರು ತಮ್ಮ ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಪ್ರಸ್ತಾಪಿಸಲು ಒಂದು ವೇದಿಕೆಯನ್ನು ಕಲ್ಪಿಸಿದ್ದು, ಉಪಯುಕ್ತವಾದ ಸಲಹೆಗಳನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿದೆ.  ಇದೇ ಮಾದರಿಯಲ್ಲಿ ಪ್ರತಿ ತಿಂಗಳ ಮೂರನೇ ಶನಿವಾರದಂದು ಬೆಂಗಳೂರು ನಗರದ ಎಲ್ಲಾ 42 ಸಂಚಾರ ಪೊಲೀಸ್ ಠಾಣಾ ಮಟ್ಟದಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ರವರ ನೇತೃತ್ವದಲ್ಲಿ ಬೆಳಿಗ್ಗೆ 11-30 ರಿಂದ 01-30 ರವರೆಗೆ ಸ್ಥಳೀಯ ಸಾರ್ವಜನಿಕರನ್ನು ಒಳಗೊಂಡ ಸಭೆ ನಡೆಯುವಂತೆ ಆಯೋಜಿಸಿದ್ದು ಸಾರ್ವಜನಿಕರಿಂದ ಈಗಾಗಲೇ ಈ ಬಗ್ಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದ್ದು ಸಭೆಯ ನಡವಳಿಗಳನ್ನು ಆಳವಾಗಿ ಅಭ್ಯಸಿಸಿ ಸೂಕ್ತವೆಂದು ಕಂಡ ಸಲಹೆಗಳನ್ನು ಜಾರಿಗೆ ತರಲಾಗಿದೆ.  ಬೆಂಗಳೂರು ನಗರ ಸಂಚಾರ ಪೊಲೀಸ್ ವಿಭಾಗದ ಸಾಮಾಜಿಕ ತಾಣವಾದ ಫೇಸ್‌ಬುಕ್ ಪುಟವು 57,000 ಕ್ಕೂ ಹೆಚ್ಚು ಹಿಂಬಾಲಕರನ್ನು ಹೊಂದಿದ್ದು ಯಾವುದೇ ಸರ್ಕಾರಿ ಇಲಾಖೆಗಳು ಇಷ್ಟು ಹೆಚ್ಚಿನ ಹಿಂಬಾಲಕರನ್ನು ಸಾಮಾಜಿಕ ತಾಣಗಳಲ್ಲಿ ಹೊಂದಿರುವುದಿಲ್ಲ.  ಅತಿ ಹೆಚ್ಚು ಹಿಂಬಾಲಕರನ್ನು ಹೊಂದಿರುವ  ಸರ್ಕಾರಿ ಇಲಾಖೆ / ಸಂಸ್ಥೆ ಎಂಬ ಹೆಗ್ಗಳಿಕೆಯು ಸಂಚಾರ ಪೊಲೀಸ್ ವಿಭಾಗಕ್ಕೆ ಸಲ್ಲುತ್ತದೆ.

ಬೆಂಗಳೂರು ಸಂಚಾರ ಪೊಲೀಸ್ ವಿಭಾಗಕ್ಕೆ ಸಂದ ಪ್ರಶಸ್ತಿಗಳು:

1) ಭಾರತ ಸರ್ಕಾರದ ಡಿ.ಒ.ಪಿ.ಟಿ ಇಲಾಖೆಯು 2011ನೇ ಸಾಲಿನಲ್ಲಿ National Award for Best use of Information and Communication Technology (ICT) ಪ್ರಶಸ್ತಿಯನ್ನು ನೀಡಿ ಪುರಸ್ಕರಿಸಿರುತ್ತದೆ.

2) ಭಾರತ ಸರ್ಕಾರದ ನಗರಾಭಿವೃದ್ಧಿ ಇಲಾಖೆಯು 2011ನೇ ಸಾಲಿನ Award for Excellence ಪ್ರಶಸ್ತಿಯನ್ನು ನೀಡಿ ಗೌರವಿಸಿರುತ್ತದೆ.

3) Golden Peacock Award for Innovative products / Services award -2012

4) Golden Peacock HR Excellence Award – 2012.

Leave a Reply

Related Websites

  • Bharatiya Janata Party
  • BJP Karnataka
  • Sri L.K. Advani
  • Sri Narendra Modi
  • Sri Ananth Kumar
  • Sri D.V. Sadananda Gowda
  • Sri Jagadish Shettar

Subscribe Newsletter

Share your Opinion

Please Send your valuable opinions, ideas or any queries. We welcome your Suggestions

Click Here to Submit