ಕರ್ನಾಟಕ ಉಗ್ರರ ಅಡಗುತಾಣ ಆಗಲು ಬಿಡುವುದಿಲ್ಲ

ಬೆಂಗಳೂರು,ಆ.31: ಕರ್ನಾಟಕ ಶಾಂತಿ, ಸಹಬಾಳ್ವೆಗೆ ಹೆಸರಾದ ರಾಜ್ಯ. ನಮ್ಮ ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಭಯೋತ್ಪಾದನೆ ನೆಲೆಗೊಳ್ಳಲು ಬಿಡುವುದಿಲ್ಲ ಎಂದು ಡಿಸಿಎಂ, ಗೃಹ ಸಚಿವ ಆರ್.ಅಶೋಕ್ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ನಿಷೇಧಿತ ಎಲ್ ಇಟಿ ಮತ್ತು ಹುಜಿ ಸಂಘಟನೆಯ 11 ಮಂದಿಯನ್ನು ಬಂಧಿಸಲಾಗಿದ್ದು, ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗಿದೆ. 14 ದಿನಗಳ ಪೊಲೀಸ್ ಕಸ್ಟಡಿಗೆ ಅವರನ್ನು ಕಳಿಸಲಾಗಿದೆ ಎಂದರು. ಆರೋಪಿಗಳ ಪೈಕಿ 27 ವರ್ಷದ ಪತ್ರಕರ್ತ ಎಂ ಸಿದ್ದಿಕಿ ಸಂಚಿನ ಮಾಸ್ಟರ್ ಮೈಂಡ್ ಆಗಿದ್ದಾನೆ ಎಂಬುದು ತಿಳಿದು ಬಂದಿದೆ.
 
ಇವರು ರಾಜ್ಯದ ಕೆಲ ರಾಜಕಾರಣಿಗಳು, ಹಿಂದೂ ಪರ ಸಂಘಟನೆಯ ಮುಖಂಡರು, ಪತ್ರಕರ್ತರು ಸೇರಿದಂತೆ ಗಣ್ಯರ ಹತ್ಯೆಗೆ ಸಂಚು ರೂಪಿಸಿದ್ದರು. ಮತ್ತೊಬ್ಬ ಅರೋಪಿ 26 ವರ್ಷದ ಈಜಾಜ್ ಮಿರ್ಜಾ ಡಿಫೆನ್ಸ್ ರಿಸರ್ಜ್ ಹಾಗೂ ಅಭಿವೃದ್ಧಿ ಸಂಸ್ಥೆ (DRDO)ಯಲ್ಲಿ ಜೂನಿಯರ್ ರಿಸರ್ಚ್ ಫೆಲೋ ಆಗಿದ್ದ. ಅಲ್ಲದೆ 6 ತಿಂಗಳ ಕಾಲ ಸಾಫ್ಟ್ ವೇರ್ ಪೋಗ್ರಾಮರ್ ಆಗಿ ಕಾರ್ಯ ನಿರ್ವಹಿಸಿದ್ದಾನೆ. ಹುಬ್ಬಳ್ಳಿಯಲ್ಲಿ ಬಂಧಿತನಾದ ಮತ್ತೊಬ್ಬ ಆರೋಪಿ ಎಂಬಿಬಿಎಸ್ ಡಾಕ್ಟರ್ ಆಗಿದ್ದಾನೆ. ಈ ಸಂದರ್ಭದಲ್ಲಿ ನಾವು ಶಂಕಿತ ಉಗ್ರರ ಪೂರ್ಣ ಮಾಹಿತಿ ನೀಡಲು ಸಾಧ್ಯವಿಲ್ಲ. ಈ ಮೂವರಿಗೆ ಅಂತಾರಾಷ್ಟ್ರೀಯ ಉಗ್ರರ ಜೊತೆ ನಿರಂತರ ಸಂಪರ್ಕವಿರುವುದು ಪತ್ತೆಯಾಗಿದೆ.ಹೆಚ್ಚಿನ ಮಾಹಿತಿ ಪಡೆಯಲು ಇಂಟರ್ ಪೋಲ್ ಸಹಾಯ ಕೇಳಲಾಗಿದೆ. ಕೇಂದ್ರ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ಅವರಿಗೂ ಸುದ್ದಿ ಮುಟ್ಟಿಸಲಾಗಿದೆ ಎಂದು ಅಶೋಕ್ ಹೇಳಿದರು.
 
ರಾಜ್ಯದಲ್ಲಿ ಎಂದಿಗೂ ಭಯೋತ್ಪಾದನೆ, ಉಗ್ರರ ನೆಲೆಯಾಗಲು ಅವಕಾಶ ನೀಡುವುದಿಲ್ಲ. ಎಲ್ಲಾ ಕೇಂದ್ರ ಸ್ಥಾನಗಳಲ್ಲೂ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಅನುಮಾನಾಸ್ಪದವಾಗಿ ನಡೆದುಕೊಳ್ಳುವ ವ್ಯಕ್ತಿಗಳನ್ನು ವಿಚಾರಣೆ ನಡೆಸಿ ಬಂಧಿಸಲಾಗುವುದು. ಅಲ್ಲದೆ ಇನ್ನು ಇರಬಹುದೆನ್ನುವ ಉಗ್ರರನ್ನು ಸದ್ಯದಲ್ಲೇ ಬಂಧಿಸಲಾಗುವುದು ಎಂದು ಅಶೋಕ್ ಹೇಳಿದರು. ಬೆಂಗಳೂರಿನ ಹೆಚ್ಚುವರಿ ಪೊಲೀಸ್ ಆಯುಕ್ತ ಟಿ ಸುನೀಲ್ ಕುಮಾರ್ ಮತ್ತು ಬಿ. ದಯಾನಂದ ಮಾರ್ಗದರ್ಶನದಲ್ಲಿ ಇನ್ಸ್‌ಪೆಕ್ಟರ್ ಗಳಾದ ಎನ್ ಬಿ ಸಕ್ರಿ ಮತ್ತು ಆನಂದ್ ಕಬ್ಬೂರ್ ನೇತೃತ್ವದಲ್ಲಿ 6 ಸದಸ್ಯರ ತಂಡ ಉಗ್ರರ ಬೇಟೆ ಗೆ ಇಳಿದಿತ್ತು. ನಮ್ಮವರಿಂದ ನಮ್ಮ ಮೇಲೆ ದಾಳಿ: ಸುಮಾರು ಎರಡು ತಿಂಗಳಿನಿಂದ ಯುವಕರ ಚಲನವಲನಗಳನ್ನು, ಎಸ್ ಎಂಎಸ್ ಸಂದೇಶಗಳನ್ನು ಟ್ರ್ಯಾಪ್ ಮಾಡಲಾಗಿತ್ತು. ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂಬುದನ್ನು ಖಚಿತವಾದ ನಂತರ ನಮ್ಮ ಪೊಲೀಸರ ತಂಡ ಹುಬ್ಬಳ್ಳಿಗೆ ತೆರಳಿದೆ. ಕೇಶವಾಪುರ ಮತ್ತು ಹಳೆಯ ಹುಬ್ಬಳ್ಳಿ ಭಾಗಗಳಲ್ಲಿ ಗಸ್ತು ತಿರುಗಿ ಮಾಹಿತಿ ಖಚಿತಪಡಿಸಿಕೊಂಡು ನಂತರ ದಾಳಿ ಮಾಡಿ ಎಲ್ಲಾ 11 ಮಂದಿಯನ್ನು ಸೆರೆ ಹಿಡಿದಿದ್ದಾರೆ. ಕೇಂದ್ರ ಅಪರಾಧ ವಿಭಾಗ(ಸಿಸಿಬಿ) ಈ ಉಗ್ರರ ತನಿಖೆ ನಡೆಸುತ್ತಿದ್ದು, ಗುಪ್ತದಳ ಅಗತ್ಯ ನೆರವು ನೀಡಿದೆ. ಕೇಂದ್ರ ಹಾಗೂ ರಾಜ್ಯ ಜಂಟಿ ಕಾರ್ಯಾಚರಣೆ ನಡೆಯುವ ಸಾಧ್ಯತೆಯೂ ಇದೆ. ಬಂಧಿತರ ಬಳಿ ಇದ್ದ ವಿದೇಶಿ ನಿರ್ಮಿತ 7.65ಎಂಎಂ ಪಿಸ್ತೂಲ್, 7 ಗುಂಡುಗಳು, ಲ್ಯಾಪ್ ಟಾಪ್, ಸ್ಮಾರ್ಟ್ ಫೋನ್ ಗಳ ತಪಾಸಣೆ, ಪರೀಕ್ಷೆ ನಡೆಸಲಾಗುತ್ತಿದೆ. ಬಂಧಿತ ಉಗ್ರರಿಂದ ಆತಂಕಕಾರಿ ಮಾಹಿತಿ ಹೊರಬಿದ್ದಿದೆ. ಸದ್ಯಕ್ಕೆ ಯಾವುದೇ ವಿಷಯ ಹೊರ ಹಾಕುವಂತಿಲ್ಲ ಎಂದು ಸಿಸಿಬಿ ಜಂಟಿ ಆಯುಕ್ತ ದಯಾನಂದ ಹೇಳಿದ್ದಾರೆ. ರಹಸ್ಯ ಸ್ಥಳದಲ್ಲಿ ತನಿಖೆ ನಡೆಸಲಾಗುತ್ತಿದ್ದು, ವಿಚಾರಣೆ ಸಂದರ್ಭದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು ಭಾಗಿಯಾಗಿದ್ದಾರೆ. ದಕ್ಷಿಣ ಭಾರತದಲ್ಲಿ ಅಲ್ಲೋಲ ಕಲ್ಲೋಲ ಉಂಟು ಮಾಡಲು ಸಾಕಷ್ಟು ಸಿದ್ಧತೆ ನಡೆಸಲಾಗಿತ್ತು ಎಂಬುದು ಸದ್ಯಕ್ಕೆ ಮಾಹಿತಿ ದೊರೆತಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Leave a Reply

Subscribe Newsletter

Share your Opinion

Please Send your valuable opinions, ideas or any queries. We welcome your Suggestions

Click Here to Submit