ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗಾಗಿ ಸೌಲಭ್ಯಗಳನ್ನು ನೀಡಲು ಇಷ್ಟರಲ್ಲೆ ನಿರ್ಧಾರ

IMG_0162

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಲಾಭದಾಯಕವಾಗಿ ಮುನ್ನಡೆಯುತ್ತಿದ್ದು ಒಟ್ಟು 30 ಸಾವಿರ ಬಸ್‌ಗಳನ್ನು ಹೊಂದಿದ್ದು ರಾಷ್ಟ್ರದಲ್ಲಿ ಪ್ರಥಮ ಹಾಗೂ ವಿಶ್ವದಲ್ಲಿ ನಾಲ್ಕನೇ ಸ್ಥಾನವನ್ನು ಪಡೆದುಕೊಂಡು ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಪ್ರಶಸ್ತಿಯನ್ನು ಗಳಿಸಿದೆ ಎಂದು ಉಪ ಮುಖ್ಯಮಂತ್ರಿ ಹಾಗೂ ಗೃಹ ಮತ್ತು ಸಾರಿಗೆ ಸಚಿವರಾದ ಶ್ರೀ ಆರ್. ಅಶೋಕ್ ರವರು ತಿಳಿಸಿದರು. ಅವರು ಇಂದು ಕೋಲಾರ ನಗರ ಸಾರಿಗೆ ಹತ್ತು ಹೊಸ ಬಸ್‌ಗಳನ್ನು ನಗರದ ಬಸ್ ನಿಲ್ದಾಣದಲ್ಲಿ ಉದ್ಘಾಟಿಸಿ ಮಾತನಾಡುತ್ತಿದ್ದರು.

ರಸ್ತೆ ಸಾರಿಗೆ ಇಲಾಖೆ ಸಾರ್ವಜನಿಕರಿಗೆ ಉತ್ತಮ ಸೌಲಭ್ಯಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ ಹೊರತು ಹಣ ಸಂಪಾದನೆ ಮಾಡುವ ದೃಷ್ಟಿಯನ್ನು ಇಟ್ಟುಕೊಂಡಿಲ್ಲವೆಂದು ಸ್ಪಷ್ಟ ಪಡಿಸಿದರು. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ನಗರ ಸಾರಿಗೆ ಬಸ್‌ಗಳನ್ನು ಅಳವಡಿಸಲಾಗುವುದು.  ಈಗಾಗಲೇ ದಾವಣಗೆರೆ, ಮಂಡ್ಯ, ತುಮಕೂರು, ಹುಬ್ಬಳ್ಳಿ, ಧಾರವಾಡ ಸೇರಿದಂತೆ ಕೋಲಾರ ಜಿಲ್ಲೆಯಲ್ಲಿ ಸಹಾ ನಗರ ಸಾರಿಗೆ ಬಸ್‌ಗಳನ್ನು ಅಳವಡಿಸಲಾಗಿದೆ ಎಂದು ಹೇಳಿದರು.

ನಗರ ಸಾರಿಗೆ ಬಸ್‌ಗಳಲ್ಲಿ ವಿದ್ಯಾರ್ಥಿಗಳು, ಅಂಗವಿಕಲರು ಪಾಸ್ ಬಳಸಿ ಪ್ರಯಾಣಿಸಬಹುದು.  ಅದೇ ರೀತಿಯಲ್ಲಿ ದೂರದ ತಾಲ್ಲೂಕುಗಳಿಂದ ಕೆ.ಎಸ್.ಆರ್.ಟಿ.ಸಿ. ಬಸ್‌ಗಳಲ್ಲಿ ಹೋಗಿ ಬರುವ ಟಿಕೆಟ್ ಪಡೆದು, ಅದನ್ನು ಸಹಾ ನಗರ ಸಾರಿಗೆಯಲ್ಲಿ ಹಣ ನೀಡದೆ ಅದೇ ಟಿಕೆಟನ್ನು ತೋರಿಸಿ ಎಲ್ಲಾ ಕೆಲಸಗಳನ್ನು ಮುಗಿಸಿಕೊಂಡು ವಾಪಸ್ಸು ಅವರ ತಾಲ್ಲೂಕುಗಳಿಗೆ ಹೋಗುವ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು.

ರಾಜ್ಯದಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗಾಗಿ ಆರನೇ ತರಗತಿಯವರಿಗೂ ಉಚಿತ ಬಸ್ ಪಾಸ್ ನೀಡುತ್ತಿದ್ದು ಇನ್ನು ಮುಂದೆ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ರಸ್ತೆ ಸಾರಿಗೆ ಇಲಾಖೆ ಹೆಚ್ಚು ಸೌಲಭ್ಯಗಳನ್ನು ನೀಡುವ ಬಗ್ಗೆ ಒಂದು ವಾರದಲ್ಲಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದರು. ರಾಜ್ಯದ ಎಲ್ಲಾ ನಗರಗಳು ಬೆಳೆಯುತ್ತಿವೆ.  ಗ್ರಾಮೀಣ ಭಾಗದ ಜನರು ವಿವಿಧ ಕಾರಣಗಳಿಂದ ಪಟ್ಟಣಕ್ಕೆ ಬಂದು ವಾಸ ಮಾಡುತ್ತಾರೆ.  ಆದುದರಿಂದ ಬಸ್ ಸೌಲಭ್ಯಗಳನ್ನು 25 ವರ್ಷಗಳಲ್ಲಿ ಆಗಬಹುದಾದ ಸಮಸ್ಯೆಗಳನ್ನು ಅರಿತು ಈಗಿನಿಂದಲೇ ರಸ್ತೆ ಸಾರಿಗೆ ಸೌಲಭ್ಯಗಳನ್ನು ವಿಸ್ತರಿಸುವ ಮುಂದಾಲೋಚನೆ ಇಟ್ಟಿಕೊಂಡಿದೆ ಎಂದು ಸಾರಿಗೆ ಸಚಿವರು ಹೇಳಿದರು.

ಕೋಲಾರ ಜಿಲ್ಲೆಯಲ್ಲಿ ಪ್ರತಿದಿನ 2.5 ಲಕ್ಷ ಜನರು ಸಂಚರಿಸುತ್ತಿದ್ದಾರೆ.  ವಿದ್ಯಾರ್ಥಿಗಳು, ಕೂಲಿಕಾರರು,  ಜನಸಾಮಾನ್ಯರಿಗೆ ಅನುಕೂಲವಾಗುವಂತೆ ಸಾರಿಗೆ ಇಲಾಖೆ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಹೇಳಿದರು. ಕೋಲಾರ ನಗರದ ಬಸ್ ನಿಲ್ದಾಣವನ್ನು ಹೈಟೆಕ್ ನಿಲ್ದಾಣವನ್ನಾಗಿ ನಿರ್ಮಿಸಲು 2.15 ಕೋಟಿ ರೂಪಾಯಿಗಳನ್ನು ಮಂಜೂರು ಮಾಡಲಾಗಿದೆ ಎಂದು ಸಚಿವರು ಪ್ರಕಟಿಸಿದರು.

ಈಗ ಪ್ರತಿಯೊಂದು ಬಸ್‌ಗೆ 19 ಲಕ್ಷ ವೆಚ್ಚವಾಗಿದ್ದು ಈಗ ಹತ್ತು ಬಸ್‌ಗಳು ಸಂಚರಿಸಲಿದ್ದು ಇನ್ನೂ 10 ಬಸ್‌ಗಳನ್ನು ಅಳವಡಿಸುವುದಾಗಿ ತಿಳಿಸಿದರು. ಪೊಲೀಸ್ ತನಿಖೆಗಾಗಿ 20 ಕೋಟಿ ರೂ. ಅನುದಾನವನ್ನು ಠಾಣೆಗಳಿಗೆ ಬಿಡುಗಡೆ ಮಾಡಲಾಗುವುದು.  ಕಮಾಂಡೋ ಪಡೆಗಾಗಿ 5 ಕೋಟಿ ನೀಡಲಾಗಿದೆ.  25 ಕೋಟಿ ರೂಪಾಯಿಗಳ ವೆಚ್ಚದಿಂದ ನೂತನ ಪೊಲೀಸ್ ಠಾಣಾ ಕಟ್ಟಡಗಳನ್ನು ನಿರ್ಮಿಸಲಾಗುವುದು. ಪೊಲೀಸ್ ಸಿಬ್ಬಂದಿಗೆ ರಜೆ ಭತ್ಯೆ 50 ರಿಂದ 100 ರೂ.ಗೆ ಹೆಚ್ಚಿಸಲಾಗುವುದು.

ಕರ್ತವ್ಯ ನಿರತ ಪೊಲೀಸರು ಮರಣ ಹೊಂದಿದರೆ ಅವರಿಗೆ ಹತ್ತು ಲಕ್ಷ ರೂ. ವಿಮೆ ಹಣವನ್ನು ನೀಡಲಾಗುವುದು.  3731 ಕೈಗಾರಿಕಾ ಭದ್ರತೆ ಪೊಲೀಸ್‌ನವರು, 241 ಸಬ್ ಇನ್ಸ್‌ಪೆಕ್ಟರ್‌ಗಳನ್ನು ನೇಮಕ ಮಾಡಿಕೊಳ್ಳಲಾಗುವುದು.  ರಾಜ್ಯದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಲು ಉತ್ತಮ ವಾತಾವರಣವಿದೆ ಎಂದರು.

ಕೋಲಾರ ಜಿಲ್ಲೆಯ ಶಾಶ್ವತ ನೀರಾವರಿ ಯೋಜನೆಯ ಎತ್ತಿನಹೊಳೆ ನೀರು ಸರಬರಾಜು ಕಾಮಗಾರಿಗಾಗಿ 3900 ಕೋಟಿ ರೂ. ವೆಚ್ಚ ಮಾಡಲು ಸಂಪುಟ ಸಭೆ ಅನುಮೋದನೆ ನೀಡಿದೆ ಎಂದು ಹೇಳಿದರು. ಸಮಾರಂಭದ ಅಧ್ಯಕ್ಷತೆಯನ್ನು ಜವಳಿ ಖಾತೆ ಸಚಿವ ಆರ್.ವರ್ತೂರ್ ಪ್ರಕಾಶ್ ವಹಿಸಿ ಮಾತನಾಡುತ್ತಾ ಕೋಲಾರ ನಗರ ಮತ್ತು ಗ್ರಾಮಾಂತರ ಠಾಣೆಗಳಿಗೆ ಹೊಸ ಕಟ್ಟಡಗಳನ್ನು ನಿರ್ಮಿಸಬೇಕು.  ಹೊಸದಾಗಿ ನರಸಾಪುರ ಮತ್ತು ಸುಗಟೂರಿನಲ್ಲಿ ಹೊಸ ಪೊಲೀಸ್ ಠಾಣೆಗಳನ್ನು ತೆರೆಯಬೇಕೆಂದು ಉಪಮುಖ್ಯಮಂತ್ರಿಯವರಲ್ಲಿ ಮನವಿ ಮಾಡಿದರು.

ಆದಷ್ಟು ಬೇಗನೆ ಹೊಸ ಬಸ್‌ನಿಲ್ದಾಣಕ್ಕೆ ಶಂಕುಸ್ಥಾಪನೆ ಮಾಡಿ ಒಂಬತ್ತು ತಿಂಗಳಿನಲ್ಲಿ ಕಟ್ಟಡ ಉದ್ಘಾಟನೆಯಾಗಬೇಕೆಂದರು. ಡಿ.ಎ.ಆರ್. ವಸತಿಗೃಹಗಳು ಬೀಳುವ ಸ್ಥಿತಿಯಲ್ಲಿದ್ದು ಅವುಗಳನ್ನು ಕೆಡವಿ ಹೊಸ ಮನೆಗಳನ್ನು ಪೊಲೀಸ್ ಸಿಬ್ಬಂದಿಗೆ ನೀಡಬೇಕೆಂದರು.

ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಕರ್ನಾಟಕ ಉಗ್ರಾಣ ನಿಗಮದ ಅಧ್ಯಕ್ಷರು ಹಾಗೂ ಶಾಸಕರಾದ ಎಂ.ನಾರಾಯಣಸ್ವಾಮಿ,  ಕರ್ನಾಟಕ ವಿದ್ಯುತ್ ಕಾರ್ಖಾನೆಯ ಅಧ್ಯಕ್ಷ ಬಿ.ಪಿ.ವೆಂಕಟಮುನಿಯಕಪ್ಪ, ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ,  ನಗರಸಭಾ ಅಧ್ಯಕ್ಷೆ  ನಾಜಿಯಾ ಬಾಬಾಜಾನ್,  ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಮಂಜುಳ, ತಾಲ್ಲೂಕು ಪಂಚಾಯತ್ ಅಧ್ಯಕ್ಷೆ ಶ್ರೀಮತಿ ರಮಾದೇವಿ,  ಜಿಲ್ಲಾಧಿಕಾರಿ ಡಾ: ಡಿ.ಎಸ್.ವಿಶ್ವನಾಥ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ರಾಜೇಂದ್ರ ಚೋಳನ್,  ಬೆಗ್ಲಿ ಸೂರ್ಯಪ್ರಕಾಶ್ ಭಾಗವಹಿಸಿದ್ದರು.  ವಿಭಾಗೀಯ ನಿಯಂತ್ರಣಾಧಿಕಾರಿ ಎಂ.ರಮೇಶ್ ಸ್ವಾಗತಿಸಿದರು.   ಲೆಕ್ಕಾಧಿಕಾರಿ ಎಂ.ವೆಂಕಟಮುನಿಯಪ್ಪ ವಂದಿಸಿದರು.

Find Photos of the function here.

Leave a Reply

Related Websites

  • Bharatiya Janata Party
  • BJP Karnataka
  • Sri L.K. Advani
  • Sri Narendra Modi
  • Sri Ananth Kumar
  • Sri D.V. Sadananda Gowda
  • Sri Jagadish Shettar

Subscribe Newsletter

Share your Opinion

Please Send your valuable opinions, ideas or any queries. We welcome your Suggestions

Click Here to Submit